ವಿದ್ಯಾಭ್ಯಾಸದ ಮೂಲಕ ಉನ್ನತ ಸ್ಥಾನಕ್ಕೇರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣ ಮತ್ತು ಉದ್ಯೋಗದ ಜತೆಗೆ ದೇಶ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯನ್ನೂ ಹೊಂದಿರಬೇಕು ಎಂದು ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ನ ಟ್ರಸ್ಟಿ ಎಂ. ಕೃಷ್ಣ ಹೆಗ್ಡೆ ಕರೆ ನೀಡಿದರು.
ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 20 ಭಾನುವಾರ ನಡೆದ ಜಿಎಸ್ಬಿ ಸಮಾಜ ಹಿತರಕ್ಷಣ ವೇದಿಕೆಯ ವಿದ್ಯಾ ಪೋಷಕ ನಿಧಿ 2026-27ನೇ ಸಾಲಿನ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ತಂತ್ರಜ್ಞಾನ ಅವಲಂಬಿತರಾಗದೆ, ಜ್ಞಾನವನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.ಸಮಾಜದ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸುವ ವಿದ್ಯಾರ್ಥಿಗಳು ಮುಂದೆ ಸ್ವಾವಲಂಬಿಗಳಾಗಿ, ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುವ ಮೂಲಕ ಸಮಾಜದ ಋಣ ತೀರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ದೇಶ ಸೇವೆಯ ಚಿಂತನೆ ಅಗತ್ಯ
ಭಾರತೀಯ ನೌಕಾಪಡೆಯ ಮಾಜಿ ಲೆಫ್ಟಿನೆಂಟ್ ಕಮಾಂಡರ್ ಸುದರ್ಶನ್ ಆರ್. ಪೈ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ದೇಶಸೇವೆಯ ಚಿಂತನೆ ಹಾಗೂ ನಿರಂತರ ಕ್ರಿಯಾಶೀಲತೆಯನ್ನು ಯುವಜನತೆ ಬೆಳೆಸಿಕೊಳ್ಳಬೇಕು. ದೇಶ-ವಿದೇಶಗಳಲ್ಲಿ ಉನ್ನತ ಉದ್ಯೋಗದ ಅವಕಾಶ ದೊರೆತರೂ ದೇಶದ ಬದ್ಧತೆ ಮತ್ತು ಅಖಂಡತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಮರೆಯಬಾರದು. ಸಂಕಷ್ಟದ ಸಂದರ್ಭಗಳಲ್ಲಿ ಸಮಾಜಕ್ಕೆ ನೆರವಾಗುವ ಗುಣ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
14 ವರ್ಷಗಳ ಸಮಾಜಮುಖಿ ಸೇವೆ
ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯು ಕಳೆದ 14 ವರ್ಷಗಳಿಂದ 12ಕ್ಕೂ ಹೆಚ್ಚು ಸಮಾಜಮುಖಿ ಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿದ್ಯಾ ಪೋಷಕ ನಿಧಿಯ ಮೂಲಕ ನೆರವಾಗುತ್ತಿದೆ. ಸಮಾಜದ ಸಹಕಾರವನ್ನು ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂಬುದು ಸಂಸ್ಥೆಯ ಆಶಯವಾಗಿದೆ ಎಂದರು. ಉಡುಪಿ, ದಕ್ಷಿಣ ಕನ್ನಡ , ಶಿವಮೊಗ್ಗಹಾಗೂ ಉತ್ತರ ಕನ್ನಡ ಜಿಲ್ಲೆಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದ ಸಭೆಯಲ್ಲಿ ಒಟ್ಟು 577 ವಿದ್ಯಾರ್ಥಿಗಳಿಗೆ 68.4 ಲಕ್ಷ ರೂಪಾಯಿ ವಿದ್ಯಾ ಪೋಷಕ ನಿಧಿಯ ಮೂಲಕ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವು ವಿತರಿಸಲಾಯಿತು.
ಆಭರಣ ಜ್ಯುವೆಲರ್ಸ್ ಪ್ರಾಯೋಜಕತ್ವದಲ್ಲಿ ಅದೃಷ್ಟಶಾಲಿ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಆಯ್ಕೆ ಮಾಡಿ ಬೆಳ್ಳಿ ನಾಣ್ಯದ ಕೊಡುಗೆ ನೀಡಿ ಗೌರವಿಸಲಾಯಿತು. ಮಾಹೆ ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಶೈಕ್ಷಣಿಕ ಕಿಟ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಎಸ್.ಎಸ್. ನಾಯಕ್ ಅಸೋಸಿಯೇಟ್ಸ್ನ ಸಂಸ್ಥಾಪಕ ಎಸ್.ಎಸ್. ನಾಯಕ್ ವಹಿಸಿ ಮಾತನಾಡುತ್ತಾ, “ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆ ಇದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ. ಪುಸ್ತಕ ಜ್ಞಾನ, ಮಾಹಿತಿ ಸಂಗ್ರಹದ ಜೊತೆಗೆ ಲೋಕಜ್ಞಾನ ಮತ್ತು ವಿವೇಚನೆಯನ್ನು ಬೆಳೆಸಿಕೊಳ್ಳಬೇಕು.
ಹಿತರಕ್ಷಣಾ ವೇದಿಕೆ 12 ಸಮಾಜಮುಖಿ ಯೋಜನೆಗಳ ಮೂಲಕ ಬದುಕಿನ ಎಲ್ಲಾ ಆಯಾಮಗಳಲ್ಲಿಯೂ ಕೂಡ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುತ್ತಿರುವುದು ಶ್ಲಾಘನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಜಿ ಸತೀಶ್ ಹೆಗಡೆ ಸ್ವಾಗತಿಸಿ ಸಂಚಾಲಕರಾದ ಶ್ರೀ ಆರ್ ವಿವೇಕಾನಂದ ಶೆಣೈ ಯವರು ಪ್ರಸ್ತಾವನೆಗೈದರು. ಜಿ ಎಸ್ ಬಿಸಮಾಜ ಹಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿ, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನದ ಸಂಯೋಜಕರಾದ ಬೆಂಗಳೂರಿನ ವಿಜಯಕುಮಾರ್ ಶೆಣೈ, ಮೂಡಬಿದ್ರೆಯವರು ವಂದಿಸಿದರು.
ಉಡುಪಿ ಅನಂತ ವೈದಿಕ ಕೇಂದ್ರದ ಪ್ರವರ್ತಕರಾದ ವೇದಮೂರ್ತಿ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್, ತ್ರಿಷಾ ವಿದ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಭಟ್, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಹ ಸಂಯೋಜಕ ಶ್ರೀ ಸುಬ್ರಮಣ್ಯ ಪ್ರಭು, ಮಂಗಳೂರು ಉಪಸ್ಥಿತರಿದ್ದರು.

ಶ್ರೀ ಅಪ್ಪುರಾಯ್ ಪೈಯವರಿಗೆ ಸನ್ಮಾನ.
ಇದೇ ಸಂದರ್ಭದಲ್ಲಿ ಸರಸ್ವತಿ ಪ್ರಭಾದ ಗೌರವ ಸಂಘಟಕರಾದ ಶ್ರೀ ಅಪ್ಪುರಾಯ ಪೈಯವರನ್ನು ಹಾರ್ದಿಕವಾಗಿ ಸನ್ಮಾನಿಸಲಾಯಿತು.

