
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಅವುಗಳಲ್ಲಿ ಹಳೆಯ ನಾಣ್ಯಗಳು, ದೇಶಿಯ, ವಿದೇಶಿ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿರುವ ಬಹಳಷ್ಟು ಜನರನ್ನು ನೋಡಬಹುದು. ಹಳೆಯ ನಾಣ್ಯಗಳು, ಅಂಚೆ ಚೀಟಿಗಳು ಇತಿಹಾಸದ ಮಹತ್ವವನ್ನು ಸಾರುವ ರಾಯಭಾರಿಗಳು. ಕೆಲವರು ನೂರಾರು ವರ್ಷಗಳ ಹಿಂದಿನ ನಾಣ್ಯಗಳನ್ನು ಸಂಗ್ರಹಿಸಿ ಆ ಕಾಲವನ್ನು ಇನ್ನೂ ಜೀವಂತವಾಗಿ ಇಟ್ಟಿರುವ ಉದಾಹರಣೆಗಳಿವೆ.

2026ರ ಅಗಸ್ಟ್ 15ರಂದು ಚಾಲುಕ್ಯ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಾಹಕರ ಸಂಘದ ವತಿಯಿಂದ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಮುದ್ರಣಾಲಯದ ಕಬ್ಬೂರು ಸಭಾ ಭವನದಲ್ಲಿ ಜರುಗಿದ ಪ್ರದರ್ಶನದಲ್ಲಿ ಅಂಚೆಚೀಟಿಗಳು, ಮೊದಲ ದಿನದ ಅಂಚೆ ಲಕೋಟೆಗಳು, ಗಾಂಧೀಜಿಯವರಿಗೆ ಸಂಬಂಧಿಸಿದ ಅಂಚೆಚೀಟಿಗಳು, ವಿದೇಶಿ ನಾಣ್ಯಗಳು, ಬೆಳ್ಳಿಯ ನಾಣ್ಯಗಳು, ಹಳೆಯ ರಾಜರ ಕಾಲದ ನಾಣ್ಯಗಳು, ಸಂಬಂಧಿತ ಪುಸ್ತಕಗಳು, ಸಾಹಿತ್ಯಕ್ಕೆ ಸಂಬಂಧಿತ ಹಿಂದಿನ(ಈಗ ಸ್ಥಗಿತಗೊಂಡಿರುವ) ಕನ್ನಡ ಹಾಗೂ ಇಂಗ್ಲೀಷ್‌ನ ಒಂದು ನೂರಕ್ಕಿಂತ ಅಧಿಕ ಪತ್ರಿಕೆಗಳು ಪ್ರದರ್ಶನಗೊಂಡವು.
ಸಂಘದ ಸದಸ್ಯರಾದ ಶ್ರೀ ಸತ್ಯಪ್ರಮೋದ ದೇಶಪಾಂಡೆ, ಶ್ರೀ ಗೋಪಾಲಕೃಷ್ಣ ಶಾನಭಾಗ, ಶ್ರೀ ನಾಗರಾಜ ಸವಣೂರು,
ಶ್ರೀ ಶೈಲೇಂದ್ರ ಪೈ, ಶ್ರೀ ಹರಿ ಮನೋಹರ, ಶ್ರೀ ಭರತ ಶಂ, ಶ್ರೀ ನಿರಂಜನ, ಶ್ರೀ ಪ್ರಮೋದ ಕರಿ, ಶ್ರೀ ಶರದ ಕರಿ, ಶ್ರೀ ರಾಘವೇಂದ್ರ ಬಿ.ಎನ್. ತಮ್ಮ ಸಂಗ್ರಹ ಸಂಗ್ರಹದಲ್ಲಿದ್ದ ಅಪೂರ್ವ ಅಂಚೆಚೀಟಿ ಹಾಗೂ ನಾಣ್ಯಗಳನ್ನು ಪ್ರದರ್ಶಿಸಿದರು.
ಶ್ರೀಮತಿ ಸರೋಜಾ ಶಾನಭಾಗ ಹಾಗೂ ಶ್ರೀಮತಿ ಸುಮತಿಯವರೂ ಭಾಗವಹಿಸಿದ್ದರು.
ಅವರಲ್ಲಿ ಹಿಂದಿನ ಸಿಂಡಿಕೇಟ್ ಬ್ಯಾಂಕ್(ಈಗಿನ ಕೆನರಾ ಬ್ಯಾಂಕ್) ನಿಂದ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾದ ಕನ್ನಡ, ಕೊಂಕಣಿ ಬರಹಗಾರರು, ಹಳೆಯ ಅಂಚೆ ಚೀಟಿ ಹಾಗೂ ನಾಣ್ಯಗಳ ಸಂಗ್ರಹಕರಾದ ಶ್ರೀ ಗೋಪಾಲಕೃಷ್ಣ ಶ್ಯಾನಭಾಗರವರು ಸಹ ಒಬ್ಬರು. ಅವರು ಈ ತನಕ ತಮ್ಮಲ್ಲಿ ಸಂಗ್ರಹಿಸಿಟ್ಟು ಕೊಂಡಿದ್ದ ಅಪೂರ್ವ ಸಂಗ್ರಹದಿಂದ ನಾಣ್ಯಗಳು, ಅಂಚೆಚೀಟಿಗಳು, ಮೊದಲ ದಿನದ ಮುಖಪುಟಗಳು, ಮ್ಯಾಜಿಕ್ ಸಂಖ್ಯೆ ಟಿಪ್ಪಣಿಗಳು, ಬೆಳ್ಳಿ ನಾಣ್ಯಗಳು, ಪ್ರಾಚೀನ ರಾಜಮನೆತನದ ನಾಣ್ಯಗಳು, ವಿದೇಶಿ ಅಂಚೆಚೀಟಿಗಳು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯದ ನಿಯತಕಾಲಿಕೆಗಳು ಇತ್ಯಾದಿಗಳನ್ನು ಪ್ರದರ್ಶಿಸಿದರು. ಇವರು ಈ ಸಂದರ್ಭದಲ್ಲಿ ೧೦೦ ಕ್ಕಿಂತ ಅಧಿಕ ದೇಶಗಳ ನಾಣ್ಯಗಳನ್ನು, ಟಿಪ್ಪಣಿಗಳನ್ನು, ಅಂಚೆಚೀಟಿಗಳನ್ನು, ಅಂಚೆಚೀಟಿಗಳ ಪುಸ್ತಕಗಳನ್ನು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ನಿಯತಕಾಲಿಕೆಗಳನ್ನು ಪ್ರದರ್ಶಿಸಿದರು,

ಈ ನಿಯತಕಾಲಿಗಳು ಹಲವಾರು ದಶಕಗಳ ಹಿಂದೆಯೇ ಪ್ರಕಟಣೆಯನ್ನು ಸ್ಥಗಿತಗೊಳಿಸಿದ್ದರೂ ಶ್ರೀ ಶ್ಯಾನಭಾಗರವರು ಆ ಸಂಚಿಕೆಗಳನ್ನು ಕಾಳಜಿಯಿಂದ ರಕ್ಷಿಸಿಟ್ಟಿರುವುದು ಅವರ ಕನ್ನಡ ಭಾಷಾಭಿಮಾನ, ಪ್ರೇಮವನ್ನು ತೋರಿಸುತ್ತದೆ. ಅವರು ಸಂಗ್ರಹಿಸಿದ ನಿತಯಕಾಲಿಕಗಳಲ್ಲಿ ಸಾಕ್ಷಿ, ರುಜುವಾತು, ದೇಶಕಾಲ, ಸಂವಾದ, ಟಿಂಗಲು, ಭವನ, ವಿನೋದ, ಅಪರಂಜಿ, ಕವಿ, ಸ್ಕೈಲಾರ್ಕ್, ಅನಿಕೇತನ, ಚಂದನ, ಪ್ರಭುದ್ಧ ಕರ್ನಾಟಕ, ಪುಸ್ತಕ ಪ್ರಪಂಚ ಇತ್ಯಾದಿ ನೂರಾರು ಪತ್ರಿಕೆಗಳು ಸೇರಿವೆ. ಈ ಪ್ರದರ್ಶನದಲ್ಲಿ ಅಂಚೆ ಚೀಟಿ ಸಹಿತ ವಿವಿಧ ಹವ್ಯಾಸಗಳಲ್ಲಿ ಅಭಿರುಚಿ ಇರುವ ಸಂದರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

