
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಅವುಗಳಲ್ಲಿ ಹಳೆಯ ನಾಣ್ಯಗಳು, ದೇಶಿಯ, ವಿದೇಶಿ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿರುವ ಬಹಳಷ್ಟು ಜನರನ್ನು ನೋಡಬಹುದು. ಹಳೆಯ ನಾಣ್ಯಗಳು, ಅಂಚೆ ಚೀಟಿಗಳು ಇತಿಹಾಸದ ಮಹತ್ವವನ್ನು ಸಾರುವ ರಾಯಭಾರಿಗಳು. ಕೆಲವರು ನೂರಾರು ವರ್ಷಗಳ ಹಿಂದಿನ ನಾಣ್ಯಗಳನ್ನು ಸಂಗ್ರಹಿಸಿ ಆ ಕಾಲವನ್ನು ಇನ್ನೂ ಜೀವಂತವಾಗಿ ಇಟ್ಟಿರುವ ಉದಾಹರಣೆಗಳಿವೆ.

ಈ ರೀತಿಯಲ್ಲಿ ನಾಣ್ಯಗಳನ್ನು ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸಿಗಳಿಗೆ ಅವರ ಅಪರೂಪದ ಸಂಗ್ರಹವನ್ನು ಪ್ರದರ್ಶಿಸುವ ಅತ್ಯದ್ಭುತ ಅವಕಾಶವನ್ನು ಪ್ರತಿ ವರ್ಷ ಅಗಸ್ಟ್ ೧೫ ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡು ಶತಕದ ಪ್ರಕಟಣೆಯನ್ನು ಪೂರೈಸಿರುವ ಕನ್ನಡ ಪ್ರಮುಖ ದೈನಿಕ ಪತ್ರಿಕೆ ಸಂಯುಕ್ತ ಕರ್ನಾಟಕ ಪ್ರತಿ ವರ್ಷ ಆಗಸ್ಟ್ ೧೫ಕ್ಕೆ ಆಯೋಜಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ೧೫-೦೮-೨೦೨೬ ರಂದು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಮುದ್ರಣಾಲಯದ ಕಬ್ಬೂರು ಸಭಾ ಭವನದಲ್ಲಿ ಅಂತಹದೇ ಒಂದು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಹವ್ಯಾಸಿ ಅಂಚೆ ಚೀಟಿ ಹಾಗೂ ಹಳೆಯ ನಾಣ್ಯಗಳ ಹವ್ಯಾಸಿ ಸಂಗ್ರಹಕರು ತಮ್ಮ ನಾಣ್ಯಗಳನ್ನು ಇಲ್ಲಿ ಪ್ರದರ್ಶಿಸಿದರು.
ಅವರಲ್ಲಿ ಹಿಂದಿನ ಸಿಂಡಿಕೇಟ್ ಬ್ಯಾಂಕ್(ಈಗಿನ ಕೆನರಾ ಬ್ಯಾಂಕ್) ನಿಂದ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾದ ಕನ್ನಡ, ಕೊಂಕಣಿ ಬರಹಗಾರರು, ಹಳೆಯ ಅಂಚೆ ಚೀಟಿ ಹಾಗೂ ನಾಣ್ಯಗಳ ಸಂಗ್ರಹಕರಾದ ಶ್ರೀ ಗೋಪಾಲಕೃಷ್ಣ ಶ್ಯಾನಭಾಗರವರು ಸಹ ಒಬ್ಬರು. ಅವರು ಈ ತನಕ ತಮ್ಮಲ್ಲಿ ಸಂಗ್ರಹಿಸಿಟ್ಟು ಕೊಂಡಿದ್ದ ಅಪೂರ್ವ ಸಂಗ್ರಹದಿಂದ ನಾಣ್ಯಗಳು, ಅಂಚೆಚೀಟಿಗಳು, ಮೊದಲ ದಿನದ ಮುಖಪುಟಗಳು, ಮ್ಯಾಜಿಕ್ ಸಂಖ್ಯೆ ಟಿಪ್ಪಣಿಗಳು, ಬೆಳ್ಳಿ ನಾಣ್ಯಗಳು, ಪ್ರಾಚೀನ ರಾಜಮನೆತನದ ನಾಣ್ಯಗಳು, ವಿದೇಶಿ ಅಂಚೆಚೀಟಿಗಳು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯದ ನಿಯತಕಾಲಿಕೆಗಳು ಇತ್ಯಾದಿಗಳನ್ನು ಪ್ರದರ್ಶಿಸಿದರು. ಇವರು ಈ ಸಂದರ್ಭದಲ್ಲಿ ೧೦೦ ಕ್ಕಿಂತ ಅಧಿಕ ದೇಶಗಳ ನಾಣ್ಯಗಳನ್ನು, ಟಿಪ್ಪಣಿಗಳನ್ನು, ಅಂಚೆಚೀಟಿಗಳನ್ನು, ಅಂಚೆಚೀಟಿಗಳ ಪುಸ್ತಕಗಳನ್ನು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ನಿಯತಕಾಲಿಕೆಗಳನ್ನು ಪ್ರದರ್ಶಿಸಿದರು,

ಈ ನಿಯತಕಾಲಿಗಳು ಹಲವಾರು ದಶಕಗಳ ಹಿಂದೆಯೇ ಪ್ರಕಟಣೆಯನ್ನು ಸ್ಥಗಿತಗೊಳಿಸಿದ್ದರೂ ಶ್ರೀ ಶ್ಯಾನಭಾಗರವರು ಆ ಸಂಚಿಕೆಗಳನ್ನು ಕಾಳಜಿಯಿಂದ ರಕ್ಷಿಸಿಟ್ಟಿರುವುದು ಅವರ ಕನ್ನಡ ಭಾಷಾಭಿಮಾನ, ಪ್ರೇಮವನ್ನು ತೋರಿಸುತ್ತದೆ. ಅವರು ಸಂಗ್ರಹಿಸಿದ ನಿತಯಕಾಲಿಕಗಳಲ್ಲಿ ಸಾಕ್ಷಿ, ರುಜುವಾತು, ದೇಶಕಾಲ, ಸಂವಾದ, ಟಿಂಗಲು, ಭವನ, ವಿನೋದ, ಅಪರಂಜಿ, ಕವಿ, ಸ್ಕೈಲಾರ್ಕ್, ಅನಿಕೇತನ, ಚಂದನ, ಪ್ರಭುದ್ಧ ಕರ್ನಾಟಕ, ಪುಸ್ತಕ ಪ್ರಪಂಚ ಇತ್ಯಾದಿ ನೂರಾರು ಪತ್ರಿಕೆಗಳು ಸೇರಿವೆ. ಈ ಪ್ರದರ್ಶನದಲ್ಲಿ ಶ್ರೀಮತಿ ಸರೋಜಾ ಮತ್ತು ಶ್ರೀ ಗೋಪಾಲಕೃಷ್ಣ ಶ್ಯಾನಭಾಗ ಅವರಂತೆ ಇನ್ನೂ ಹಲವಾರು ಹವ್ಯಾಸಿಗಳು ತಮ್ಮ ಸಂಗ್ರಹದ ನಾಣ್ಯ, ಅಂಚೆ ಚೀಟಿಗಳನ್ನು ಪ್ರದರ್ಶಿಸಿದರು. ಅಂಚೆ ಚೀಟಿ ಸಹಿತ ವಿವಿಧ ಹವ್ಯಾಸಗಳಲ್ಲಿ ಅಭಿರುಚಿ ಇರುವ ಸಂದರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

