ಗುರು. ಮೇ 28th, 2026
    DSC08666
    Spread the love

    ಉಡುಪಿ, ಮೇ 27: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಶಾಲಾ ಶಿಕ್ಷಣ ವಿಭಾಗದಲ್ಲಿ ಅತ್ಯುತ್ತಮವಾದ ಸಾಧನೆಯನ್ನು ದಾಖಲಿಸುತ್ತಾ ಬಂದಿದೆ. ಪ್ರಮಾಣ, ಗುಣಮಟ್ಟ ಎರಡೂ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧನೆಗೆ ಮುಖ್ಯ ಶಿಕ್ಷಕರು ಮತ್ತು ಇಲಾಖೆಯು ನೀಡುತ್ತಿರುವ ಮಾರ್ಗದರ್ಶನ ಸ್ತುತ್ಯರ್ಹ ಎಂದು ಮಣಿಪಾಲ ಅಕಾಡೆಮಿ ಆಪ್‌ ಹೈಯರ್‌ ಎಜುಕೇಶನ್‌ನ ಪ್ರೋ ಚಾನ್ಸಲರ್‌ ಡಾ. ಎಚ್‌.ಎಲ್‌. ಬಲ್ಲಾಳ್‌ ತಿಳಿಸಿದರು. ಅವರು ಉಡುಪಿ ಜಿಲ್ಲಾ ಪಂಚಾಯತ್‌ ಶಾಲಾ ಶಿಕ್ಷಣ ಇಲಾಖೆ, ಮಾಹೆ, ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ  ಸಂಘದ  ಸಹಯೋಗದಲ್ಲಿ  ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾ ಭವನದಲ್ಲಿ  ಆಯೋಜಿಸಿದ ಉಡುಪಿ  ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ  ಶೈಕ್ಷಣಿಕ  ಕಾರ್ಯಾಗಾರ ಮತ್ತು  2025-26ನೇ ಸಾಲಿನಲ್ಲಿ ಶೇಕಡಾ 100 ಫಲಿತಾಂಶ  ಪಡೆದ ಜಿಲ್ಲೆಯ ಪ್ರೌಢ ಶಾಲೆಗಳ ಅಭಿನಂದನಾ  ಸಭೆಯ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

    DSC08698

    ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಕರಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಕೆರಳಿಸುವುದು, ಅವರ ಅಭಿವ್ಯಕ್ತಿಯನ್ನು ಉತ್ತಮಪಡಿಸಲು ನಿರಂತರ ಶ್ರಮದ ಅಗತ್ಯವನ್ನು ಒತ್ತಿ ಹೇಳಿದರು. ಶಿಕ್ಷಕರು ಬದ್ಧತೆ ಮತ್ತು ಪ್ರೀತಿಯಿಂದ ತೊಡಗಿಕೊಂಡಾಗಿ ಶ್ರೇಷ್ಠ ಫಲಿತಾಂಶವನ್ನು ದಾಖಲಿಸುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಅತ್ಯುತ್ತಮ ಅಂಕಗಳನ್ನು ದಾಖಲಿಸಿದ 10 ವಿದ್ಯಾರ್ಥಿಗಳಿಗೆ ಹಾಗೂ ಶೇಕಡಾ 100 ಫಲಿತಾಂಶವನ್ನು ದಾಖಲಿಸಿದ 197 ಶಾಲೆಗಳ ಮುಖ್ಯಶಿಕ್ಷಕರಿಗೆ ಈ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಮುಂದಿನ ವರ್ಷ ಉಡುಪಿ ಜಿಲ್ಲೆಯು ಎಸ್‌.ಎಸ್‌.ಎಲ್‌.ಸಿ. ಫಲಿತಾಂಶದಲ್ಲಿ ಶೇಕಡಾ 100 ರ ಸಾಧನೆಯನ್ನು ನಡೆಸಲು ಈ ಕಾರ್ಯಕ್ರಮವು ಪ್ರೇರಣೆಯನ್ನು ಒದಗಿಸುತ್ತದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅಶೋಕ ಕಾಮತ್‌ ಇವರು ತಿಳಿಸಿದರು.

     

    ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರತೀಕ್‌ ಬಾಯಲ್‌ ಐಎಎಸ್‌ ಇವರು ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ, ಸಂಖ್ಯಾಜ್ಞಾನದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕು. ನಾಗರೀಕ ಪ್ರಜ್ಞೆಯನ್ನು ರೂಪಿಸುವಲ್ಲಿ ಶಿಕ್ಷಕರ ವೈಯಕ್ತಿಕ ಕಾಳಜಿಗಳು ಬಹಳ ಪರಿಣಾಮಕಾರಿಯಾಗಲಿವೆ ಎಂಬುದನ್ನು ಸಂಶೋಧನೆಗಳು ಒತ್ತಿ ಹೇಳುತ್ತಿವೆ. ಯಾವುದೇ ವಿದ್ಯಾರ್ಥಿಯು ಅನುತ್ತೀರ್ಣತೆಯ ನೋವನ್ನು ಅನುಭವಿಸದಂತೆ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ ಡಾ. ಶ್ರೀಧರ ಆರ್‌. ಪೈ,   ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶ್ರೀ ಕಿರಣ್‌ ಹೆಗ್ಡೆ ಸಮಯೋಚಿತವಾಗಿ ಮಾತನಾಡಿದರು.

    ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಲೋಕೇಶ ಸಿ. ಸ್ವಾಗತಿಸಿ, ಡಯಟ್‌ನ ಉಪನ್ಯಾಸಕರಾದ ಡಾ. ಕಿಶೋರ ಕುಮಾರ ಶೆಟ್ಟಿ ವಂದಿಸಿದರು. ಶ್ರೀ ರಾಜೇಂದ್ರ ಭಟ್‌ ಕಾರ್ಯಕ್ರಮವನ್ನು ನಿರೂಪಿಸಿದರು.  


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!