



ಜಿ. ಎಸ್. ಬಿ. ಸಮಾಜ ಹಿತರಕ್ಷಣಾ ವೇದಿಕೆ, ಉಡುಪಿ ಜಿಲ್ಲೆ ಇವರ ಪರಿಕಲ್ಪನೆ ಹಾಗೂ ಸಂಯೋಜನೆಯ ಡಾ. ಪಿ. ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ ಗ್ರಂಥದ ಲೋಕಾರ್ಪಣೆಯ ಒಂದು ವೈಶಿಷ್ಠ್ಯಪೂರ್ನ ಕಾರ್ಯಕ್ರಮವು ದಿನಾಂಕ. ೦೨-೦೮-೨೦೨೬ರಂದು ಪಾಣೆಮಂಗಳೂರಿನ ಶ್ರೀ ವೀರವಿಠಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಾಣೆಮಂಗಳೂರಿನ ಶ್ರೀ ವೀರವಿಠಲ ವೆಂಕಟರಮಣ ಸ್ವಾಮಿ ದೇವಳ ಹಾಗೂ ಪಾಣೆಮಂಗಳೂರು ಏಜುಕೇಶನ್ ಸೊಸೈಟಿ ಇವರ ಸಹಕಾರದೊಂದಿಗೆ ಸಂಪನ್ನಗೊಳಿಸಲಾಯಿತು.
ಮೊದಲಿಗೆ ಶ್ರೀ ವೀರವಿಠ್ಠಲ ಮಹಿಳಾ ಭಜನಾ ಮಂಡಳಿಯ ಸದಸ್ಯರು ಪ್ರಾರ್ಥನಗೈಯ್ಯುವುದರ ಮೂಲಕ ಸಮಾರಂಭ ಆರಂಭವಾಯಿತು.
ಪಾಣೆಮಂಗಳೂರು ಏಜುಕೇಶನ್ ಸೊಸೈಟಿ ಇದರ ಅಧ್ಯಕ್ಷರಾದ ಶ್ರೀ ಸಿ.ಎನ್. ನರೇಂದ್ರನಾಥ ಕುಡ್ವಾರವರು ಡಾ|| ದಯಾನಂದ ಪೈಯವರ ದಾನಗುಣ ವಿನಯತೆ ಹಾಗೂ ಸರಳತೆಯನ್ನು ಕೊಂಡಾಡುತ್ತಾ ಸಮಾರಂಭಕ್ಕೆ ಆಗಮಿಸಿದ ಡಾ|| ದಯಾನಂದ ಪೈ ಪರಿವಾರದೊಂದಿಗೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.



ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಶ್ರೀ ವಿವೇಕಾನಂದ ಶೆಣೈಯವರು ತಮ್ಮ ಜೀವನವನ್ನು ಹೇಗೆ ಸಾಕ್ಷಾತ್ಕರಿಸ ಬಹುದೆಂಬುದನ್ನು ಪ್ರತ್ಯಕ್ಷವಾಗಿ ಸಾಧಿಸಿ ತೋರಿಸಿದವರು ಡಾ|| ದಯಾನಂದ ಪೈಯವರು. ಅವರ ಸರಳತೆ, ಹೃದಯಶ್ರೀಮಂತಿಕೆಯನ್ನು ಹತ್ತಿರದಿಂದ ಪಡೆಯುವ ಸೌಭಾಗ್ಯ ತನಗೆ ದೊರಕಿದೆ ಅಲ್ಲದೇ ಅವರ ನಿರಂತರ ಸಹಕಾರವನ್ನು ಪಡೆದುಕೊಳ್ಳುವ ಸದಾವಕಾಶವನ್ನು ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಗೆ ದೊರಕಿರುವುದು ನಮ್ಮ ಮಹಾಭಾಗ್ಯ , ಡಾ|| ದಯಾನಂದ ಪೈಯವರ ಸಾರ್ಥಕ ಜೀವನದ ಸಾಕ್ಷಾತ್ಕಾರ ಗ್ರಂಥದ ಪುಟಪುಟವನ್ನು ಡಾ|| ದಯಾನಂದ ಪೈಯವರ ಸಲಹೆಯನ್ನು ಪಡೆದುಕೊಂಡೇ ಶ್ರೀಮತಿ ಪ್ರಜ್ವಲಾ ಶೆಣೈಯವರು ತುಂಬಾ ವೈಶಿಷ್ಠ್ಯಪೂರ್ಣವಾಗಿ ತಯಾರಿಸಿದ್ದಾರೆ. ಎಂದು ಹೇಳಿ ಡಾ|| ದಯಾನಂದ ಪೈ ದಂಪತಿಗಳ ಹೃದಯವೈಶಾಲ್ಯತೆಯನ್ನು ಹೃದಯತುಂಬಿ ಬಣ್ಣಿಸಿದರು.

ವೈದಿಕರ ವೇದಘೋಷದೊಂದಿಗೆ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರು ಸೇರಿ ಸಮಾರಂಭವನ್ನು ಉದ್ಘಾಟಿಸಿದರು.
ಡಾ|| ದಯಾನಂದ ಪೈಯವರ ಸಾರ್ಥಕ ಬದುಕಿನ ಸಾಕ್ಷಾತ್ಕಾರ ಗ್ರಂಥದ ಸಂಪಾದಕಿ ಶ್ರೀಮತಿ ಪ್ರಜ್ವಳಾ ಶೆಣೈ ಕಾರ್ಕಳ ಇವರು ಮಾತನಾಡಿನೂರಾರು ಕೈಗಳಿಂದ ಸಂಪಾದಿಸಿ ಸಹಸ್ರಾರು ಕೈಗಳಿಗೆ ಹಂಚುವಂತಹ ಮಹಾದಾನಿ ಡಾ|| ದಯಾನಂದ ಪೈಯವರ ಕುರಿತು ಗ್ರಂಥ ರಚಿಸಿರುವುದು ನನ್ನ ಮಹಾಭಾಗ್ಯವೆಂದು ಹೇಳಿ ಈ ಸಚಿತ್ರ ಗ್ರಂಥ ರಚೆನೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ಮೊದಲಿಗೆ ಶ್ರೀ ವೀರವಿಠ್ಠಲ ವೆಂಕಟರಮಣ ದೇವರ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಿ ಆನಂತರ ವೇದಿಕೆಯ ಮೇಲೆ ಈ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹ್ಯಾಂಗ್ಯೋ ಐಸ್‌ಕ್ರೀಮ್ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀ ಪ್ರದೀಪ ಪೈಯವರು ಮಾತನಾಡಿ ಇಂಥಹ ಅತ್ಯಪರೂಪದ ಪುಸ್ತಕವನ್ನು ಲೋಕಾರ್ಪಣೆಗೊಳಿಸುವ ಸದವಕಾಶ ತನಗೆ ದೊರಕಿರುವುದು ನನ್ನ ಮಹಾಭಾಗ್ಯವೆಂದು ಹರ್ಷ ವ್ಯಕ್ತಪಡಿಸಿದರು. ಡಾ|| ಪಿ.ದಯಾನಂದ ಪೈ ಹಾಗೂ ಅವರ ಸಹೋದರ ಶ್ರೀ ಸತೀಶ ಪೈಯವರು ರಾಮಲಕ್ಷಣರಿದ್ದಂತೆ, ಅವರ ಕುಟುಂಬದ ಗುಣವನ್ನು ಇತರರೂ ಅಳವಡಿಸಿಕೊಳ್ಳಬೇಕು ಎಂದರು. ತಾನು ಕಳೆದ ಎರಡು ದಶಕಗಳಿಂದ ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದು ಅವರ ದಾನಶೀಲತೆಯನ್ನು ಹತ್ತಿರದಿಂದ ಕಂಡವನಿದ್ದೇನೆ ಎಂದು ಶ್ಲಾಘಿಸಿ ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು. ಹಲವಾರು ವರ್ಷಗಳ ಹಿಂದೆಯೇ ಅವರು ರೂ. ೨೫೦ ಕೋಟಿಗಳಿಗಿಂತ ಅಧಿಕ ಹಣವನ್ನು ದಾನರೂಪವಾಗಿ ನೀಡಿದ್ದಾರೆಂದು ಕೇಳಿದೇನೆ ಆ ರೀತಿಯ ದಾನಶೀಲತೆಯನ್ನು ಈಗಲೂ ಅವರು ಮುಂದುವರಿಸಿದ್ದಾರೆ ಎಂದು ತಿಳಿಸಿ ಅವರಿಗೆ ದೊರಕಿರುವ ಪ್ರಶಸ್ತಿ-ಪುರಸ್ಕಾರಗಳ ಬಗ್ಗೂ ಪ್ರಸ್ತಾಪಿಸಿ, ಅವರೋರ್ವ ಶಕ್ತಿ, ನಡೆದಾಡುವ ಸಂಸ್ಥೆ ಎಂದು ಕೊಂಡಾಡಿದರು. ಹಾಗೂ ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಜನೋಪಯೋಗಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಡಾ|| ದಯಾನಂದ ಪೈ ಹಾಗೂ ಶ್ರೀಮತಿ ಮೋಹಿನೀ ಪೈ ದಂಪತಿಗಳನ್ನು ಸಂಘ-ಸಂಸ್ಥೆಗಳ ವತಿಯಿಂದ ಹೃತ್ಪೂರ್ವಕವಾಗಿ ಗೌರವಪೂರ್ವಕವಾಗಿ ಸತ್ಕರಿಸಿ ಅಭಿನಂದಿಸಲಾಯಿತು. ಡಾ|| ದಯಾನಂದ ಪೈಯವರು ಸಮಾಜದ ರೋಲ್ ಮಾಡಲ್ ಎಂಬುದನ್ನು ಸಮಾಜಕ್ಕೆ, ದೇಶಕ್ಕೆ ತಿಳಿಯ ಪಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಾಸಬದ್ಧವಾಗಿ ಡಾ|| ದಯಾನಂದ ಪೈಯವರ ಜೀವನ ಸಾಧನೆಯನ್ನು ಎಳೆಎಳೆಯಾಗಿ ತಿಳಿಸಿಕೊಟ್ಟವರು ಖ್ಯಾತ ಲೆಕ್ಕ ಪರಿಶೋಧಕರಾದ ಸಿ.ಎ. ಎಸ್.ಎಸ್. ನಾಯಕ ಅವರು.
ಗ್ರಂಥವನ್ನು ಮುದ್ರಿಸಿದ ಅನಂತ ಪ್ರಕಾಶನ ಮುದ್ರಣಾಲಯದ ಶ್ರೀ ಮಿಥುನ ಉಡುಪ ಹಾಗೂ ಗ್ರಂಥವನ್ನು ಸಂಕಲಿಸಿದ ಡಾ|| ಅನ್ನಪೂರ್ಣ ಕಾಮತ್ ಅವರನ್ನು ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಅಧ್ಯಕ್ಷ, ಕಾರ್ಯದರ್ಶಿ, ಸಂಚಾಲಕರಾದಿಯಾಗಿ ಎಲ್ಲಾ ಪ್ರಮುಖರನ್ನು, ಪದಾಧಿಕಾರಿಗಳನ್ನು ಡಾ|| ಪಿ.ದಯಾನಂದ ಪೈಯವರು ತಮ್ಮ ದಾನಾಮೃತ ಕರಕಮಲಗಳಿಂದ ಶಾಲು ಹೊದಿಸಿ ಸ್ಮರಣಿಕೆ, ಫಳವಸ್ತು ನೀಡಿ ಸತ್ಕರಿಸಿದರು.
ಪಾಣೆಮಂಗಳೂರು ಊರ ಜನರ ಪರವಾಗಿ ವೇದಮೂರ್ತಿ ಮೊ. ಜನಾರ್ಧರನ ಭಟ್‌ರವರು ಡಾ|| ದಯಾನಂದ ಪೈಯವರ ಶ್ರೀಮಂತಿಕೆ, ಗುಣವಂತ. ಸಮರ್ಪಣ ಮನೋಭಾವ, ದಾನಶೀಲತೆಯ ಮಹತ್ವವನ್ನು ವಿವರಸಿ ಶುಭ ಹಾರೈಸಿದರು.
ಡಾ|| ಪಿ. ದಯಾನಂದ ಪೈಯವರು ಮಾತನಾಡುತ್ತಾ `ದೇವರ, ಪೂಜ್ಯ ಗುರುಗಳ ಕೃಪಾಶೀರ್ವಾದಗಳಿಂದ ಸಮಾಜಕ್ಕೆ ಸದೃಢತೆ ದೊರಕಲೆಂದು ಪ್ರಾರ್ಥಿಸಿ. ಇಂದು ತನಗೆ ಇಚ್ಛಿತ ಸಮಾಧಾನ ದೊರಕಿದೆ. ಸಮಾಜದಿಂದ ದೊರಕಿದ್ದನ್ನು ತನಗೆ ಬೇಕಾದಷ್ಟು ಬಳಸಿ, ಅದಕ್ಕಿಂತ ಮಿಗಿಲಾದದ್ದನ್ನು ಸಮಾಜಕ್ಕ ಹಿಂತಿರುಗಿಸ ಬೇಕೆನ್ನುವ ಮನೋಭಾವನೆ ತನ್ನದು. ವಯಸ್ಸಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಆದರೆ ಸಾಧನೆ ಮಾಡಲು ವಯಸ್ಸಿನ ಇತಿಮಿತಿಯಿಲ್ಲ. ಇನ್ನೊಬ್ಬರ ಕಣ್ಣೀರನ್ನು ಒರಿಸಲು ನಿಮ್ಮಿಂದ ಸಾಧ್ಯವಾದರೆ ಅದೇ ಸಾರ್ಥಕತೆ. ನನಗೆ ಮೊದಲಿನಿಂದಲೂ ವೈಶಿಷ್ಠ್ಯಪೂರ್ಣಭಯೋಗ್ರಪಿ ರಚಿಸ ಬೇಕೆಂಬ ಬಯಕೆ ಇತ್ತು ಅದನ್ನು ಅರ್ಥಮಾಡಿಕೊಂಡು ಅದರಂತೆ ರಚಿಸಿದ ಶ್ರೀಮತಿ ಪ್ರಜ್ವಲಾ ಶೆಣೈಗೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅವರಿಗೆ ಭವ್ಯಭವಿಷ್ಯವಿದೆ. ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ನಾನು ಹಲವಾರು ವರ್ಷಗಳಿಂದ ಕಂಡಿದ್ದೇನೆ. ಅವರದ್ದು ತೋರಿಕೆಯ ಸೇವಾಭಾವನೆಯಲ್ಲ ಅವರು ಇಟ್ಟು ಕೊಂಡಿರುವ ಸೇವೆ ಹಾಗೂ ಸಂಘಟನೆಯನ್ನು ಮನಗಂಡಿದ್ದೇನೆ. ಇದನ್ನು ಅವರು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಿ, ನನ್ನ ದಾನಕ್ಕೆ ಸಹೋದರ ಸತೀಶ ಪೈ ಹಾಗೂ ನನ್ನ ಧರ್ಮಪತ್ನಿಯ ಸಹಕಾರವೂ ಇದೆ ಅನ್ನುವುದನ್ನು ಮರೆಯುವಂತಿಲ್ಲ. ಬೇರೆಯವರಿಗಾಗಿ ಬದುಕುವವರು ಎಂದೂ ಸಾಯುವುದಿಲ್ಲ ಎಂಬುದನ್ನು ನಾವೆಂದೂ ಮರೆಯಬಾರದು. ದೇವರು ಕೊಟ್ಟದನ್ನು ಕಷ್ಟದಲ್ಲಿದ್ದವರಿಗೆ, ಅಗತ್ಯವಿದ್ದವರಿಗೆ ನೀಡುವುದೇ ದೇವರು ಕೊಟ್ಟಿದ್ದನ್ನು ಆತನಿಗೆ ಹಿಂತಿರುಗಿಸುವ ಪರಿ, ಅದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗದಿದ್ದರೂ ಸಣ್ಣ ಪ್ರಮಾಣದಲ್ಲಾದರೂ ಮಾಡುವುದು ಪ್ರತಿಯೊಬ್ಬರು ಕರ್ತವ್ಯ, ಹಣದಿಂದ ಸಾಧ್ಯವಾಗದಿದ್ದರೂ ಸೇವೆ ಇತ್ಯಾದಿ ರೂಪದಲ್ಲಾದರೂ ನೀಡಿದರೆ ಅದರಿಂದಲೂ ಜನ್ಮಸಾರ್ಥಕವಾಗುತ್ತದೆ ಎಂದು ಕರೆನೀಡಿದರು.
ಶ್ರೀ ವೀರವಿಠಲ ವೆಂಕಟರಮಣ ಸ್ವಾಮಿ ದೇವಳ, ಪಾಣೆಮಂಗಳೂರು ಇದರ ಆಡಳಿತ ಮೊಕ್ತೇಸರು, ಶ್ರೀ ಎನ್. ಪ್ರಮೋದ್ ಭಟ್‌ರವರು ತಮ್ಮ ಅಧ್ಯಕ್ಷಿಯ ಭಾಷಣಗೈದಲ್ಲಿ ಜಿ.ಎಸ್.ಬಿ. ಸಮಾಜದ ಧ್ರುವತಾರೆ ಡಾ|| ಪಿ. ದಯಾನಂದ ಪೈಯವರು ಸೇವೆ ಹಾಗೂ ಸಾಧನೆಯನ್ನು ವಿವರಿಸಿ ಈ ಅವಿಸ್ನರಣೀಯ ಕಾರ್ಯಕ್ರಮದಲ್ಲಿಅವರು ಊರಿಗಾಗಿ ನೀಡಿರುವ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಹಾಗೂ ಅವರನ್ನೂ ಸ್ಮರಣಿಕೆ ನೀಡಿ ಹೃತ್ಪೂರ್ವಕವಾಗಿ ಸತ್ಕರಿಸಿದರು.
ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯವಾಯಿತು.

