೩.೫ ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ನೇತೃತ್ವದಲ್ಲಿ ಸುಮಾರು ೩.೫ ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾದ ೧.೯ ಕಿ.ಮೀ. ಮಣಿಪಾಲ ಕೈಗಾರಿಕಾ ವಸಾಹತಿನ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ| ಟಿ. ಸತೀಶ್ ಯು. ಪೈ ಅವರು ಶುಕ್ರವಾರ ನೆರವೇರಿಸಿದರು.

ಬಳಿಕ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ದಿ| ಕೋಟೇಶ್ವರ ಗೋವಿಂದ್ರಾಯ ವಿಟ್ಠಲ ಕಾಮತ್ ಸ್ಮಾರಕ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ರಸ್ತೆ ಅಭಿವೃದ್ಧಿಯನ್ನು ಕರ್ತವ್ಯವಾಗಿ ಪರಿಗಣಿಸಿ, ರಾಜ್ಯಕ್ಕೆ ಮಾದರಿಯಾಗುವ ಕೆಲಸವನ್ನು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ನಡೆಸಿದೆ. ಈ ರಸ್ತೆ ಅಭಿವೃದ್ಧಿಗೆ ಡಾ| ಟಿ.ಸತೀಶ್ ಯು. ಪೈ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಮಣಿಪಾಲದ ಸಂಸ್ಥೆಗಳಿಂದಲೇ ಉಡುಪಿ, ಮಣಿಪಾಲವು ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಶಾಸಕರು ಈ ಹಿಂದೆಯೇ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರಿಂದ ಮುಂದಿನ ಅಭಿವೃದ್ಧಿ ಕೆಲಸವೂ ಸುಲಭದಲ್ಲಿ ನಡೆಯಲು ಸಹಾಯವಾಯಿತು ಎಂದರು.
ಈ ವೇಳೆ ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಕಂಪೆನಿಯ ರೋಹನ್ ಡಿ’ಕೊಸ್ತಾ, ಕಲ್ಯಾಣಿ ರೆಡಿಮಿಕ್ಸ್ ಕಾಂಕ್ರೀಟ್ ಕಂಪೆನಿಯ ಗಣೇಶ್ ಪ್ರಭು, ಅಲ್ಟ್ರಾಟೆಕ್ ರೆಡಿಮಿಕ್ಸ್ ಕಾಂಕ್ರೀಟ್ ಕಂಪೆನಿಯ ಗಣೇಶ್ ಗುಲ್ವಾಡಿ, ಆರ್‌ಎಂಎಕ್ಸ್ ಕಾಂಕ್ರೀಟ್ ಇಂಡಿಯಾದ ಸುಧಾಕರ್ ಎಸ್. ಪೂಂಜಾ, ಪ್ರಿಸಂ ಜಾನ್ಸನ್ ರೆಡಿಮಿಕ್ಸ್ ಕಾಂಕ್ರೀಟ್ ಕಂಪೆನಿಯ ಪ್ರಶಾಂತ್ ಕಲ್ಗುಟ್ಕರ್ ಅವರನ್ನು ಸನ್ಮಾನಿಸಲಾಯಿತು.
ಪೌರಾಯುಕ್ತ ಮಹಾಂತೇಶ್ ಹಂಗರಗಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿ. ನಾಯಕ್, ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಕಾರ್ಪೋರೇಟರ್ ಕಲ್ಪನಾ ಸುಧಾಮ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಉಪಾಧ್ಯಕ್ಷ ವಲ್ಲಭ ಭಟ್, ಮಾಜಿ ಅಧ್ಯಕ್ಷರಾದ ಪ್ರಶಾಂತ್ ಬಾಳಿಗಾ, ಚಿತ್ತರಂಜನ್ ಭಟ್, ವಿಶ್ವನಾಥ ಭಟ್, ಗಣೇಶ ಕಿಣಿ, ರಮೇಶ್ ಬಂಗೇರ, ಜಿಲ್ಲಾ ಸಣ್ಣಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಹರೀಶ್ ಕುಂದರ್, ಅಧ್ಯಕ್ಷ ಎಂ. ವಸಂತ ಕಿಣಿ, ಕಾರ್ಯಕಾರಿ ಸದಸ್ಯ ಜ್ಞಾನಾನಂದ, ಕಾರ್ಯದರ್ಶಿ ರಂಜನ್ ಕಲ್ಕೂರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಉದ್ಘಾಟನ ಕಾರ್ಯಕ್ರಮದ ಬಳಿಕ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ನೇತೃತ್ವದ ವತಿಯಿಂದ ಡಾ| ಟಿ. ಸತೀಶ್ ಯು. ಪೈ. ಅವರಿಗೆ ಶಾಲು ಹೊದಿಸಿ, ಸನ್ಮಾನಿಸಲಾಯಿತು.
