

`ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂಇದು ಸಹಕಾರಿ ತತ್ತ್ವದ ಪ್ರಮುಖ ಸಂದೇಶವಾಗಿದ್ದು, ಭಾರತದಲ್ಲಿಯೇ ಪ್ರಪ್ರಥಮವಾಗಿ ಬ್ಯಾಂಕಿಂಗ್ ಸಹಕಾರ ಸಂಘವು ೧೯೦೪ರಲ್ಲಿ ಬಂಗಾಳದಲ್ಲಿ ಸ್ಥಾಪನೆಯಾದರೆ, ಅದೇ ವರ್ಷ ಕರ್ನಾಟಕದಲ್ಲಿಯೇ ಪ್ರಪ್ರಥಮ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಗಿದ್ದು ನಮ್ಮ ರಾಜ್ಯಕ್ಕೆ ದೊಡ್ಡ ಗರಿಮೆ. ಇದು ಕರ್ನಾಟಕದಲ್ಲಿ ಸಹಕಾರಿ ಚಳುವಳಿಯ ಆರಂಭಕ್ಕೆ ನಾಂದಿಯಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇಂದು ಸುಮಾರು ೨೦ಕ್ಕಿಂತ ಅಧಿಕ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದು ಕುಂದಾಪುರ ತಾಲೂಕಿನಲ್ಲಿ ಕುಂದಾಪುರ, ಸಿದ್ದಾಪೂರದ ನಂತರ ಮೂರನೇಯದಾಗಿ ಸ್ಥಾಪನೆಯಾದ ಪ್ರಾಥಮಿಕ ಕೃಷಿ ಸಹಕಾರ ಸಂಘವೇಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ. ಈ ಸಂಘವು ಕೀರ್ತಿಶೇಷ ಮಾನಂಜೆ ನಾರಾಯಣ ರಾಯರ ಅಧ್ಯಕ್ಷತೆಯಲ್ಲಿ ೧೯೫೦ರಲ್ಲಿ ನೋಂದಾಯಿಸಲ್ಪಟ್ಟಿತು.



ಶ್ರೀ ಬ್ರಾಹ್ಮೀದುರ್ಗಾ ಪರಮೇಶ್ವರಿ ದೇವಿ ನೆಲೆಸಿರುವ ಮಲೆನಾಡಿನ ಮಡಿಲಿನಲ್ಲಿರುವ ಶ್ರೀ ಕ್ಷೇತ್ರ ಕಮಲಶಿಲೆಯ ಸೆರಗಿನಲ್ಲಿರುವ ಮಾನಂಜೆ ಎಂಬಲ್ಲಿ ಈ ಸಂಘವನ್ನು ಕೇವಲ ೩೯ ಜನ ಸದಸ್ಯರಿಂದ ದಿನಾಂಕ. ೧೫-೦೫-೧೯೫೦ ರಂದು ನೋಂದಾಯಿಸಿ, ದಿನಾಂಕ. ೦೭-೦೬-೧೯೫೦ ರಂದು ‘ಕಮಲಶಿಲೆ ವಿವಿಧೋದ್ದೇಶ ಸಹಕಾರ ಸಂಘ’ ಎಂಬ ನಾಮಾಂಕಿತದೊಂದಿಗೆ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿತು. ಕೀರ್ತಿಶೇಷ ಮಾನಂಜೆ ನಾರಾಯಣ ರಾಯರೇ ಈ ಸಹಕಾರಿ ಸಂಘದ ಸ್ಥಾಪಕರು. ಇಂದು ಈ ಸಂಘ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಕಮಲಶಿಲೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಥಳಿಕರು ಇಂದಿಗೂ ಇದನ್ನು ಮಾನಂಜೆ ಸೊಸೈಟಿ ಎಂದೇ ಕರೆಯುತ್ತಾರೆ. ಶಿವಮೊಗ್ಗ ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಹುಲೇಕಲ್ ಘಾಟಿ ಇಳಿದು ನಾಲ್ಕೈದು ಕಿ.ಮೀ. ಕ್ರಮಿಸುವುದರೊಳಗೆ ಸಿದ್ದಾಪುರವೆಂಬ ಊರು ಬರುತ್ತದೆ. ಸಿದ್ದಾಪುರ ಪೇಟೆಯಿಂದ ಸ್ವಲ್ಪ ಹಿಂದೆ (ಶಿವಮೊಗ್ಗದಿಂದ ಬರುವಾಗ) ಬಲಭಾಗಕ್ಕೆ ತಿರುಗಿದರೆ ಮೊದಲು ಮಾನಂಜೆ ಸೊಸೈಟಿಯ ಭವ್ಯ ಕಟ್ಟಡ, ನಂತರ ಶ್ರೀ ಕ್ಷೇತ್ರ ಕಮಲಶಿಲೆ ಸಿಗುತ್ತದೆ.

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿ ಇದರ ಕಾರ್ಯವ್ಯಾಪ್ತಿಯು ಕಮಲಶಿಲೆ, ಹಳ್ಳಿಹೊಳೆ, ಆಜ್ರಿ ಹಾಗೂ ಯಡಮೊಗೆ ಗ್ರಾಮಗಳಲ್ಲಿ ಪಸರಿಸಿದೆ. ಸ್ಥಾಪನೆಯಾಗುವಾಗ ಇದ್ದ ೩೯ ಸದಸ್ಯರ ಸಂಖ್ಯೆ ಇಂದು ೧೯,೦೦೦ವನ್ನು ಮೀರಿದೆ. ಶೇರು ಬಂಡವಾಳು ರೂ. ೨,೬೦,೦೦,೦೦೦/- (ಎರಡು ಕೋಟಿ ಅರವತ್ತು ಲಕ್ಷ)ದ ಆಸುಪಾಸಿನಲ್ಲಿದೆ. ಮಾನಂಜೆ ಸೊಸೈಟಿಯು ಪ್ರತಿ ವರ್ಷ ತನ್ನ ಸಹಕಾರಿ ಸಂಘದ ಸದಸ್ಯರಿಗೆ ರೂ. ೧೭೫ ಕೋಟಿಗಳಿಗಿಂತ ಅಧಿಕ ಹಣವನ್ನು ಸಾಲದ ರೂಪದಲ್ಲಿ ಹಂಚುತ್ತಿದೆ. ಅಲ್ಲದೇ ಕೋಟ್ಯಾನುಗಟ್ಟಲೆ ಲಾಭವನ್ನೂ ಗಳಿಸುತ್ತಿದ್ದು, ಸದಸ್ಯರ ಶೇರುಗಳಿಗೆ ಅತ್ಯಧಿಕ ಡಿವಿಡೆಂಟ್ ಅನ್ನು ನೀಡುತ್ತಾ ಕುಂದಾಪುರ ತಾಲೂಕಿನಲ್ಲಿಯೇ ಪ್ರತಿಷ್ಟಿತ ಪ್ರಾಥಮಿಕ ಕೃಷಿ ಸಹಕಾರಿ ಸಂಘವೆಂಬ ಖ್ಯಾತಿ ಪಾತ್ರವಾಗಿದೆ.

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘವು ಸದಸ್ಯರ ಹಾಗೂ ಪರಿಸರದ ನಾಗರಿಕರ ಅನುಕೂಲತೆಗಾಗಿ ಹಲವಾರು ರೀತಿಯ ಉಳಿತಾಯ ಸೌಲಭ್ಯಗಳನ್ನು ಒದಗಿಸುತ್ತಿದ್ದು ಆಕರ್ಶಕ ಬಡ್ಡಿಯನ್ನು ನೀಡುತ್ತಿದೆ. ಅದರೊಂದಿಗೆ ಸರಕಾರದಿಂದ ರೈತರಿಗೆ ದೊರಕುವ ಬಡ್ಡಿರಹಿತ ಕೃಷಿ ಸಾಲದೊಂದಿಗೆ ಗೃಹ ನಿರ್ಮಾಣ ಸಾಲ, ವಾಹನ ಖರೀದಿ ಸಾಲ, ಗೋಲ್ಡ್ ಲೋನ್, ಪರ್ಸನಲ್ ಲೋನ್, ಶಿಕ್ಷಣ ಸಾಲ ಸಹಿತ ಹಲವಾರು ವಿಧದ ಸಾಲ ಸೌಲಭ್ಯವನ್ನು ಒದಗಿಸುತ್ತದೆ ಮಾತ್ರವಲ್ಲದೇ ಸರಕಾರದಿಂದ ದೊರಕುವ ಇತರ ಹಲವಾರು ಸೌಲಭ್ಯಗಳನ್ನು ತನ್ನ ಸದಸ್ಯರಿಗೆ ದೊರಕಿಸುತ್ತಿದೆ. ಅಲ್ಲದೇ ಕೃಷಿ ಉತ್ಪತ್ತಿ ಹೆಚ್ಚಿಸಲು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಗೃಹಬಳಕೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತದೆ. ತತ್ಸಂಬಂಧ ಮಾನಂಜೆ, ಹಳ್ಳಿಹೊಳೆ, ಎಡಮೊಗೆ ಹಾಗೂ ಆಜ್ರಿಹರದಲ್ಲಿ ಮಾರಾಟ ಡಿಪೋಗಳನ್ನು ತೆರೆದಿದೆ. ಮಾನಂಜೆ, ಹಳ್ಳಿಹೊಳೆ, ಎಡಮೊಗೆ, ಆಜ್ರಿಹರ, ಸಿದ್ದಾಪುರಗಳಲ್ಲಿ ಸಹಕಾರಿ ಸಂಘದ ಶಾಖೆಗಳಿವೆ.

ಸಹಕಾರ ಸಂಘದ ಪ್ರಸಕ್ತ ಅಧ್ಯಕ್ಷರಾದ ಸರ್ವಶ್ರೀ ಬಿ. ಪ್ರದೀಪ ಯಡಿಯಾಳ, ಉಪಾಧ್ಯಕ್ಷರಾದ ಶ್ರೀ ಸುದೀಪ ಶೆಟ್ಟಿ ಇವರ ಸಮರ್ಥ ನಾಯಕತ್ವದಲ್ಲಿ, ಮುಖ್ಯಕಾರ್ಯ ನಿರ್ವಣಾಧಿಕಾರಿಗಳಾದ ಶ್ರೀ ಬಿ. ಮಂಜುನಾಥ ನಾಯ್ಕರವರ ಮೇಲ್ವಿಚಾರಣೆ, ಇತರ ೧೩ ಜನ ಉತ್ಸಾಹಿ ನಿರ್ದೇಶಕರ ನಿರಂತರ ಬೆಂಬಲ ಹಾಗೂ ಸಿಬ್ಬಂಧಿ ವರ್ಗದವರ ನಿಃಸ್ವಾರ್ಥ ಸೇವೆಯಿಂದ ೧೯೫೦ರಲ್ಲಿ ಸ್ಥಾಪಿತವಾದ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘವು ಇಂದು ಅತ್ಯಧಿಕವಾಗಿ ಕ್ರಿಯಾಶೀಲವಾಗಿದ್ದು, ನಿರಂತರವಾಗಿ ಸೇವಾನಿರತವಾಗಿದೆ. ಇವರೊಂದಿಗೆ ಈ ಹಿಂದಿನ ಆಡಳಿತ ಸಮಿತಿ, ನಿರ್ದೇಶಕರ ಹಾಗೂ ಸಿಬ್ಬಂಧಿ ವರ್ಗದವರ ಸಮರ್ಪಿತ ಸೇವಾಭಾವನೆಯನ್ನೂ ಸಹ ಮರೆಯುವಂತಿಲ್ಲ. ಅವರೆಲ್ಲರ ಸ್ವಾರ್ಥರಹಿತ ಸೇವಾ ಮನೋಭಾವದಿಂದ ಮಾನಂಜೆ ಸಹಕಾರ ಸಂಘದ ಹತ್ತಾರು ಸಾವಿರ ಸದಸ್ಯರಿಗೆ ನಿರಂತರವಾಗಿ ಹಲವಾರು ವಿಧದ ಸೇವೆ ಸಲ್ಲಿಸುತ್ತಾ, ಅವರೆಲ್ಲರನ್ನು ಆರ್ಥಿಕವಾಗಿ ಸದೃಢಗೊಳಿಸಿರುವುದನ್ನು ಸಹ ನಾವು ನೆನಪಿಸಿಕೊಳ್ಳಬೇಕು.
ಈಗ ಸಂಘದ ಸ್ಥಾಪನೆಯ 75 ವರ್ಷಗಳು ಪೂರ್ಣಗೊಂಡು ಸಂಸ್ಥೆಯು ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ತತ್ಸಂಬಂಧ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ೨೦೦ಕ್ಕಿಂತ ಅಧಿಕ ಹಿರಿಯ ಸದಸ್ಯರಿಗೆ ಹಾಗೂ ಸಹಕಾರಿ ಸಂಘದ ಈ ಹಿಂದಿನ ನಿರ್ದೇಶಕರಿಗೆ ಸನ್ಮಾನಿಸುವ ಹೃತ್ಪೂರ್ವಕ ಸಮಾರಂಭಗಳು ಇದಾಗಲೇ ನಡೆದಿವೆ. ಎಲ್ಲವುದಕ್ಕೂ ಕಿರೀಟವೆನ್ನುವಂತೆ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭವು ಇದೇ ೨೦೨೬ರ ಜನವರಿ ೩೧ರಂದು ಮಾನಂಜೆ ಸೊಸೈಟಿಯ ಪ್ರಧಾನ ಕಚೇರಿಯ ಆವರಣದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಳ್ಳಲಿದೆ.
ಅಂದು ಬೆಳಿಗ್ಗೆ ೮-೦೦ಕ್ಕೆ ಸಹಕಾರ ಧ್ವಜಾರೋಹಣ ನಡೆಯಲಿದೆ, ೯-೦೦ಕ್ಕೆ ಆಹ್ವಾನಿತ ಗಣ್ಯರನ್ನು ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನದಿಂದ ಸಮಾರಂಭ ನಡೆಯುವ ಸಹಕಾರಿ ಸಂಘದ ಆವರಣದ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಬೆಳಿಗ್ಗೆ ೧೦-೦೦ಕ್ಕೆ ಉದ್ಘಾಟನಾ ಸಮಾರಂಭ. ಅಧ್ಯಕ್ಷತೆಯನ್ನು ಮಾನಂಜೆ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪ್ರದೀಪ ಯಡಿಯಾಳರವರು ವಹಿಸಲಿದ್ದಾರೆ. ಸಮಾರಂಭಕ್ಕೆ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ, ಶಾಸಕರಾದ ಶ್ರೀ ಗುರುರಾಜ ಗಂಟಿಹೊಳಿ, ಶ್ರೀ ಕಿರಣಕುಮಾರ ಕೊಡ್ಗಿ, ದಕ್ಷಿಣಕನ್ನಡ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್.ರಾಜೇಂದ್ರ ಕುಮಾರ ಸಹಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವಾರು ಗಣ್ಯರು ಆಗಮಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ನಂತರ ಮಧ್ಯಾಹ್ನ ೧೨ ಗಂಟೆಯಿಂದ ರಾತ್ರಿ ೧೧-೦೦ ಗಂಟೆಯ ತನಕ ಅವ್ಯಾಹಿತವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಿವೃತ್ತ ಪದಾಧಿಕಾರಿಗಳಿಗೆ, ನಿವೃತ್ತ ಅಧಿಕಾರಿಗಳಿಗೆ ಹಾಗೂ ನಿವೃತ್ತ ಸಿಬಂಧಿ ವರ್ಗದವರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಹೋಳಿನೃತ್ಯ, ಕೋಲಾಟ, ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ, ಗದಾಯುದ್ಧ-ಕನಕಾಂಗಿ ಕಲ್ಯಾಣ ಪ್ರಸಂಗದ ಯಕ್ಷಗಾನ, ಶ್ರೀ ಗಂಗಾವತಿ ಪ್ರಾಣೇಶ ಮತ್ತು ತಂಡದವರಿಂದ ನಗೆಹಬ್ಬ, ಸಂಗೀತ ಗಾನಾಮೃತ ಲಯ ಲಹರಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿದು ಬಂದಿದೆ.

