ಕನ್ನಡದ ಪ್ರತಿಭಾವಂತ ಜಾನಪದ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಸರಸ್ವತಿ ಪ್ರಭಾ ಯೂಟ್ಯೂಬ್ ಚಾನಲ್ ವತಿಯಿಂದ ಸತತವಾಗಿ 2ನೇ (ದ್ವಿತೀಯ) ವರ್ಷದಲ್ಲಿಯು ಆಯೋಜಿಸಿದ್ದ ಆನಲೈನ್ ಭಜನಾ ಸಂಗಮ `ಸರಸ್ವತಿ ಪ್ರಭಾ ಭಜನೋತ್ಸವ 2025' ರಲ್ಲಿ ಅತ್ಯುತ್ತಮವೆನಿಸಿದ ಎಂಟು ಭಜನಾ ವಿಡೀಯೋಗಳನ್ನು ಸರಸ್ವತಿ ಪ್ರಭಾ ಚಾನಲ್ ವತಿಯಿಂದ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. 2025ನೇ ವರ್ಷದ ಭಜನೋತ್ಸವವನ್ನು ಯಕ್ಷಗುರು ಹಾಗೂ ಕುಂದಾಪುರ ತಾ||ನ ಕಮಲಶಿಲೆ ಯಕ್ಷಗಾನ ಮೇಳದ ಸಂಸ್ಥಾಪಕರಾಗಿದ್ದ ದಿ. ಆರಗೋಡು ರಾಮಚಂದ್ರ ಶ್ಯಾನುಭಾಗರಿಗೆ ಅವರ 110ನೇ (1915-2025) ಜನ್ಮೋತ್ಸವದ ಸಲುವಾಗಿ ಅರ್ಪಿಸಲಾಗಿತ್ತು. ಬಹುಮಾನಕ್ಕೆ ಆಯ್ಕೆ ಮಾಡುವ ಸಲುವಾಗಿ ಪ್ರತಿಯೊಂದು ಭಜನಾ ವಿಡಿಯೋ ಗಳಿಸಿದ ವೀಕ್ಷಣೆಗಳು, ವೀಕ್ಷಣೆಯ ಸರಾಸರಿ ಅವಧಿ, ವಿಡಿಯೋ ಗಳಿಸಿರುವ ಲೈಕ್ ಹಾಗೂ ತೀರ್ಪುಗಾರರು ನೀಡಿರುವ ಅಂಕಗಳನ್ನು ಸೇರಿಸಿ ಬಹುಮಾನಿತರನ್ನು ಆಯ್ಕೆ ಮಾಡಲಾಗಿದೆ. ತೀರ್ಪುಗಾರರಾಗಿ ಹಿರಿಯರಾದ ಶಿರಸಿ ತಾ||ನ ಶ್ರೀಮತಿ ಜಯಶ್ರೀ ನಾಯಕ, ಎಕ್ಕಂಬಿ ಹಾಗೂ ಮೈಸೂರಿನ ಶ್ರೀ ಜನಾರ್ಧನ ಭಟ್‌ರವರು ಸಹಕಾರ ನೀಡಿದರು.
ಭಜನೋತ್ಸವದಲ್ಲಿ ಪ್ರಥಮ ಬಹುಮಾನವನ್ನು ನವ್ಯಾ ಮನೋಹರ ಪ್ರಭು, ಗೋಕರ್ಣ ಇವರು ಹಾಡಿರುವ `ಕಲಿಯುಗದಲಿ ಹರಿ ನಾಮವ...' ಈ ಭಜನಾ ವಿಡಿಯೋ ಪಡೆದಿದೆ. ದ್ವಿತೀಯ ಬಹುಮಾನವನ್ನು ಲಕ್ಷ್ಮಿ ಯಶವಂತ. ಪ್ರಭು ಸಾಗರ ಇವರು ಹಾಡಿರುವ ನಂಬಿ ಕೆಟ್ಟವರಿಲ್ಲವೋ…' ವಿಡಿಯೋ ಪಡೆದಿದೆ. ತೃತೀಯ ಬಹುಮಾನವನ್ನು ಗಾಯತ್ರಿ ಜಿ. ಪ್ರಭು ತೀರ್ಥಹಳ್ಳಿ ಇವರು ಹಾಡಿರುವ ನಿನ್ನ ನೋಡಿ ಧನ್ಯನಾದೆನೋ..' ವಿಡಿಯೋ ಪಡೆದಿದೆ.



ಇದರೊಂದಿಗೆ ಐದು ಭಜನಾ ವಿಡಿಯೋಗಳಿಗೆ ಸಮಾಧಾನಕರ ಬಹುಮಾನವನ್ನೂ ನೀಡಲಾಗಿದೆ. ಸಾಗರದ ಗೀತಾ ಗೋಪಾಲಕೃಷ್ಣ ಪ್ರಭುರವರು ಹಾಡಿರುವ ಮಾರುತನೇ ಏಳೆಂದು..,' ಮುಂಬೈನ ಸಗುಣ ಪ್ರಕಾಶ ಭಟ್ ಇವರು ಹಾಡಿರುವ ಅಂಜಿಕಿನ್ನ್ಯಾತಕಯ್ಯ…,' ನಿರ್ಮಲಾ ಎಸ್. ಶೆಣೈ, ಬೈಲೂರು, ಕಾರ್ಕಳ ಇವರು ಹಾಡಿರುವ ವೈಕುಂಠ ನಾರಾಯಣ...,' ಆಶಾ ಜಯೇಂದ್ರ ಪ್ರಭು ಮುಂಬೈ ಇವರು ಹಾಡಿರುವ ನಿನ್ನ ಭಕುತಿ ಬೀರೋ…’ ಹಾಗೂ ಜಯಾ ಆರ್. ಪೈ ಸಾಗರ ಇವರು ಹಾಡಿರುವ “ಯಾರೇ ರಂಗನ, ಯಾರೇ…’ಈ ವಿಡಿಯೋಗಳನ್ನು ಸಮಾಧಾನಕರ ಬಹುಮಾನಗಳಿಗಾಗಿ ಆಯ್ಕೆ ಮಾಡಲಾಗಿದೆ.
2025ನೇ ಸಾಲಿನ ಭಜನೋತ್ಸವಕ್ಕೆ 75ಕ್ಕಿಂತ ಅಧಿಕ ಪ್ರತಿಭಾವಂತ ಭಜನಾ ಕಲಾವಿದರು ವಿಡಿಯೋ ತಯಾರಿಸಿ ಕಳುಹಿಸಿದ್ದು ಅವುಗಳಲ್ಲಿ 49 ಭಜನಾ ವಿಡಿಯೋಗಳನ್ನು ಆಯ್ಕೆ ಮಾಡಿ ಸರಸ್ವತಿ ಪ್ರಭಾ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟಿಸಲಾಗಿತ್ತು. ಭಜನೋತ್ಸವದಲ್ಲಿ ಬಹುಮಾನ ಪಡೆದ ವಿಡಿಯೋಗಳ ಭಜನಾ ಕಲಾವಿದರಿಗೆ ಸದ್ಯದಲ್ಲಿಯೇ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಸರಸ್ವತಿ ಪ್ರಭಾ ಭಜನೋತ್ಸವದ ಸಂಘಟಕರಾದ ಆರಗೋಡು ಸುರೇಶ ಶೆಣೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಸ್ವತಿ ಪ್ರಭಾ ಭಜನೋತ್ಸವ 2025ರಲ್ಲಿ ಭಾಗವಹಿಸಿರುವ ಎಲ್ಲಾ ಕಲಾವಿದರ ವಿಡಿಯೋಗಳನ್ನು ಸರಸ್ವತಿ ಪ್ರಭಾ ಯೂ ಟ್ಯೂಬ್ ಚಾನಲ್‌ನಲ್ಲಿ ನಿರಂತರವಾಗಿ ವೀಕ್ಷಿಸ ಬಹುದು.

